Sunday, October 22, 2023

ಹಲಸೂರು ಗೇಟ್ ಪೊಲೀಸರ ಮಿಂಚಿನ ಕಾರ್ಯಾಚರಣೆ: ಅಂತರ್ ರಾಜ್ಯ ಕಳ್ಳನ ಬಂಧನ


ಬೆಂಗಳೂರು ನಗರ:- 
28/09/2023 :ಹಲಸೂರು ಗೇಟ್ ಇನ್ಸ್ಪೆಕ್ಟರ್ ಹನಮಂತ ಕೆ ಭಜಂತ್ರಿ ಹಾಗೂ ಠಾಣೆ ಪೊಲೀಸರು ಚಿನ್ನಾಭರಣಗಳ ಕಳ್ಳತನದ ಆರೋಪದ ಮೇಲೆ ಇಬ್ಬರನ್ನ ಬಂಧಿಸಿದ್ದಾರೆ.
ಲಾಲ್ ಸಿಂಗ್ ರಾವ್ ಬಿನ್ ಪಾರಸ್ ಮಲ್ರಾವ್
(20 ವರ್ಷ) ಆನಂದನಗರ, ಆವುರ್ ತಾಲೂಕ್ ಚಾಲುರು ಜಿಲ್ಲೆ, ರಾಜಸ್ಥಾನ ಮತ್ತು ಅಭಿಷೇಕ್ ಬಿನ್ ಕುಶಾಲ್ ಸಿಂಗ್ (23 ವರ್ಷ) ಮಾಧವಪುರ ಆವೂರು ಗ್ರಾಮ, ರಾಜಸ್ಥಾನ ಬಂದಿತ ಆರೋಪಿಗಳಿದ್ದಾರೆ.
ಬಂದಿತರಿಂದ ಒಟ್ಟು ಅಂದಾಜು 75,00,000 ಮೌಲ್ಯದ ಒಂದು ಕೆಜಿ 262 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಹಲಸೂರು ಗೇಟ್ ಠಾಣೆ ವ್ಯಾಪ್ತಿಯ ಜ್ಯೂವೆಲರಿ ಅಂಗಡಿಯ ಮಾಲೀಕರು ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೇಲ್ಸ್ಮೆನ್ ಲಾಲ್ ಸಿಂಗ್ ರವರನ್ನು ಆಂಧ್ರಪ್ರದೇಶದ ನಲ್ಲೂರಿನಲ್ಲಿರುವ ಮುಕೇಶ್ ಮತ್ತು ಶುಭಂ ಜ್ಯೂವೆಲರಿ ಅಂಗಡಿಗಳಿಗೆ ಒಟ್ಟು 1 ಕೆಜಿ 262 ಗ್ರಾಂ ಚಿನ್ನದ ಆವರಣಗಳನ್ನು ಕೊಟ್ಟು ಬರುವಂತೆ ಕಳುಹಿಸಿದ್ದರು.

ಅಲ್ಲಿಗೆ ಹೋದ ಸೇಲ್ಸ್ ಮ್ಯಾನ್. ಎರಡು ದಿನಗಳ ನಂತರ ಮಾಲೀಕರಿಗೆ ಕರೆ ಮಾಡಿ ನಲ್ಲೂರಿನಲ್ಲಿ ನನಗೆ ಯಾರೊ ಅಪರಿಚಿದರು. ದಾರಿ ಮಧ್ಯೆ ನನ್ನನ್ನು ಬಂಧಿಸಿ ಗನ್ ಪಾಯಿಂಟ್ ಮಾಡಿ ಚಾಕುವಿನಿಂದ ಹಲ್ಲೇ ಮಾಡಿ ಚಿನ್ನವಿದ್ದ ಬ್ಯಾಗ್ ಅನ್ನು ಕಿತ್ತುಕೊಂಡು ನನ್ನನ್ನು ನಡು ರಸ್ತೆಯಲ್ಲಿ ಬಿಟ್ಟುಹೋದರು ಎಂದು ತಿಳಿಸಿದ್ದಾರೆ. 

ಗಾಬರಿಯಾದ ಮಾಲೀಕರು ಸೇಲ್ಸ್ ಮ್ಯಾನ್ ಅನ್ನು ನಲ್ಲೂರಿನಿಂದ ವಾಪಸ್ ಕರೆಸಿಕೊಂಡು ದಿನಾಂಕ 2.10.2023 ರಂದು ಹಲಸೂರು ಗೇಟ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಆ ದೂರಿನ ಅನ್ವಯ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತ ಕೆ ಭಜಂತ್ರಿಯವರು ಕಾರ್ಯಾಚರಣೆಗೆ ಇಳಿದು ಕೂಲಂಕುಶವಾಗಿ ನಾನಾ ರೀತಿಯಲ್ಲಿ ತನಿಖೆ ಮಾಡಿದಾಗ, ಸೇಲ್ಸ್ ಮೇಲೆಯೆ ತೀವ್ರವಾಗಿ ಅನುಮಾನ ಮೂಡಿದ್ದು. ಸೇಲ್ಸ್ ಮ್ಯಾನ್ ರನ್ನು ನಾನಾ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರ ಬಿದ್ದಿದೆ.ಆತ ತನ್ನ ಇತರರೊಂದಿಗೆ ಸೇರಿ ಕಳ್ಳ ತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಆತ ನೀಡಿದ ಮಾಹಿತಿ ಮೇಲೆ ರಾಜಸ್ಥಾನದಲ್ಲಿದ್ದ ಆರೋಪಿಯನ್ನು ಬಂಧಿಸಿ ಆತನಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತಿಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ಬೆಂಗಳೂರು ನಗರ ಕೇಂದ್ರ ವಿಭಾಗದ ಶೇಖರ್ ಮತ್ತು ಹಲಸುರು ಗೇಟ್ ಉಪ ವಿಭಾಗದ ಎ.ಸಿ.ಪಿ ಶಿವಾನಂದ ಚಲವಾದಿ ಯವರ ಮಾರ್ಗದರ್ಶನ ಹಾಗೂ ಅಲಸೂರು ಗೇಟ್ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತ ಕೆ ಭಜಂತ್ರಿ ರವರ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿವರಾದ ಮುರಳಿಧರನ್ , ನರಸಿಂಹಮೂರ್ತಿ ಏಚ್ ಡಿ, ಸುರೇಶ್ ರಂಗನಾಥ್, ನಾಗಪ್ಪ ಜೋಗಿ, ಶಶಿಕಾಂತ್ ಮತ್ತು ಟಿ ನಾಗೇಶ್, ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಅಪರಾಧಗಳನ್ನು ಮಾಡುವುದು ಕ್ಷಣಕಾಲದ ಕೆಲಸ.
ಆದರೆ…. ಅಪರಾಧಗಳನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ.
ಕ್ಷಣಕಾಲದ ಕೆಲಸದಿಂದ ಸಾಯುವವರೆಗೂ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಅಪರಾಧ ಮಾಡುವ ಮುನ್ನ ಸಾವಿರ ಸಲ ಯೋಚಿಸಿ.
ಅಪರಾಧ ತಮಗೂ ಸಮಾಜಕ್ಕೂ ಒಳ್ಳೆಯ ನಡತೆ ಅಲ್ಲ..✍️

Wednesday, October 18, 2023

ಅಭಿವೃದ್ದಿಗಾಗಿ ಎದುರು ನೋಡುತ್ತಿದೆ: ಶರಣ ಶ್ರೀ ಕುಳುವ ನುಲಿಯ ಚಂದಯ್ಯನವರ ಅವಶೇಷಗಳು

"ಕುಳುವ ವಾಣಿ" ಯ ಸಂದೇಶ......✍️

"ಅಭಿವೃದ್ದಿಗಾಗಿ ಎದುರು ನೋಡುತ್ತಿದೆ ನುಲಿಯ ಚಂದಯ್ಯನವರ ಅವಶೇಷಗಳು"

12 ನೇ ಶತಮಾನದಲ್ಲಿ ಬಸವಣ್ಣನವರು ವೈದಿಕ ಧರ್ಮವನ್ನು ಧಿಕ್ಕರಿಸಿ ಕಲ್ಯಾಣ ಕ್ರಾಂತಿ ಮಾಡಿದಾಗ ಅದರಲ್ಲಿ ಪಾಲ್ಗೊಂಡು ಹಲವಾರು ವರ್ಷಗಳ ಕಾಲ ಬಸವ ಧರ್ಮ ಪ್ರಚಾರ ಮಾಡುತ್ತ ಬಸವಣ್ಣನವರ ಲಿಂಗೈಕ್ಯದ ನಂತರವೂ ಶರಣರ ವಚನಗಳನ್ನು ತನ್ನ ಹೆಗಲಿಗೆ ಕಟ್ಟಿಕೊಂಡು, ಕಾಡು ಮೇಡುಗಳಲ್ಲಿ ಅಲೆಯುತ್ತಾ ಕರ್ನಾಟಕದಾದ್ಯಂತ ಸಂಚರಿಸಿ ಬಸವಧರ್ಮ ಪ್ರಚಾರ ಮತ್ತು ಅನ್ನ ದಾಸೋಹ ಮಾಡುತ್ತ ಸಂಚಲನ ಮೂಡಿಸಿದ,

"ಕುಳುವ ಭಾಷೆಯನ್ನಾಡುವ" ನಮ್ಮ ಸಮಾಜದ, ಶರಣ ನುಲಿಯ ಚಂದಯ್ಯನವರು,

ಚಂದಯ್ಯನವರು ಒಮ್ಮೆ ತಮ್ಮ ಇಷ್ಟಲಿಂಗ ಚಂದೇಶ್ವರನ ಸ್ಮರಣೆ ಮಾಡುತ್ತ ಹುಲ್ಲು ಕುಯುತ್ತಾ ತನ್ನ ಕಾಯಕದಲ್ಲಿ ಮಗ್ನರಾಗಿದ್ದಾಗ, ತನ್ನ ಕೊರಳಲ್ಲಿದ್ದ ಇಷ್ಟಲಿಂಗವು ಕಳಚಿ ಬೀಳುತ್ತದೆ, ಕ್ಷಣಕಾಲ ನಿಬ್ಬೆರಗಾದ ಚಂದಯ್ಯ, ಲಿಂಗವನ್ನು ಹುಡುಕುವ ಗೋಜಿಗೆ ಹೋಗದೆ ತನ್ನ ಕಾಯಕವನ್ನು ಮುಂದುವರಿಸುತ್ತಾರೆ, ಸ್ವಲ್ಪ ಸಮಯದ ನಂತರ ಇದನ್ನು ಕಂಡ

"ಮಡಿವಾಳ ಮಾಚಯ್ಯ" ಚಂದಯ್ಯನನ್ನು ಉದ್ದೇಶಿಸಿ ಇಷ್ಟ ಲಿಂಗವೆಲ್ಲಿ..? ಎಂದು ಪ್ರಶ್ನಿಸುತ್ತಾರೆ, ಅದಕ್ಕೆ ಚಂದಯ್ಯನವರು ನನ್ನ ಕಾಯಕ ನಾನು ಮಾಡುತ್ತಿದ್ದೇನೆ, ಲಿಂಗದ ಕಾಯಕ ಲಿಂಗ ಮಾಡಲು ಹೋಗಿದೆ ಎಂದು ನಗುತ್ತಲೇ ಉತ್ತರಿಸುತ್ತಾರೆ, ಈ ಉತ್ತರದಿಂದ ಆಶ್ಚರ್ಯಚಕಿತರಾದ ಮಾಚಯ್ಯ, ಈ ಪ್ರಸಂಗವನ್ನು ಬಸವಣ್ಣನವರಲ್ಲಿಗೆ ಕೊಂಡೊಯ್ಯುತ್ತಾರೆ,

ಬಸವಣ್ಣನವರು ಚಂದಯ್ಯನನ್ನು ಉದ್ದೇಶಿಸಿ ಹೇಳುತ್ತಾರೆ, ಅಯ್ಯಾ.. ಶರಣರಿಗೆ, ಜಂಗಮ, ಲಿಂಗ, ದಾಸೋಹ, ಕಾಯ, ವಾಚ, ಮನಸ, ಶುಚಿತ್ವ, ಬಹುಮುಖ್ಯ ಇವನ್ನು ಕಳೆದುಕೊಂಡರೆ ಶರಣರು ಆತ್ಮವಿದ್ದು ಚೈತನ್ಯ ಕಳೆದುಕೊಂಡಂತೆ ದಯಮಾಡಿ ಲಿಂಗವನ್ನು ಮತ್ತೆ ಕೊರಳಲ್ಲಿ ಧರಿಸು ಎನ್ನುತ್ತಾರೆ.

ಇದಕ್ಕೆ ನಯವಾಗಿ ಉತ್ತರಿಸುವ ಚಂದಯ್ಯ, ಶರಣರೇ ಸೂರ್ಯ ಹುಟ್ಟುವಾಗಿನಿಂದ ಹಿಡಿದು ಜಗತ್ತಿಗೆ ಕತ್ತಲು ಆವರಿಸುವವರೆಗೂ, ತಾನು ಮಾಡುವ ಎಲ್ಲಾ ಕಾಯಕದಲ್ಲೂ ಲವಶೇಷವೂ ದೋಷ ಬರದಂತೆ ಎಚ್ಚರವಹಿಸುತ್ತಿದ್ದೇನೆ, ಈ ಲಿಂಗಯ್ಯನ ಪೂಜೆಯಾಗಲಿ, ಈತನಿಗೆ ಅರ್ಪಿಸುವ ದಾಸೋಹಕ್ಕಾಗಲಿ,ಯಾವುದೇ ಲೋಪ ಬರದಂತೆ ನಿಗಾ ವಹಿಸಿದ್ದೇನೆ, ಹೀಗಿರುವಾಗ ಈ ಲಿಂಗಯ್ಯನಿಗೆ ನಾನು ಮಾಡಿದ ತಪ್ಪಾದರೂ ಏನು ...?

ಈ ಲಿಂಗಯ್ಯನ ಕಾಯಕವಾದರೂ ಏನು....? ಜಂಗಮಾದಿ ಶರಣರಿಂದಿಡಿದು ಸಕಲ ಪ್ರಾಣಿಗಳ ಹಿತ ಕಾಪಾಡುವುದೇ ಹಾಗಿದೆ ಅಲ್ಲವೇ ಹೀಗಿರುವಾಗ, ಲಿಂಗಯ್ಯ ತನ್ನ ಕಾಯಕ ನಿಷ್ಠೆಯನ್ನು ಮರೆತು, ಎನ್ನ ತೊರೆದು ನನ್ನ ಹಿತವನ್ನು ಮರೆತು ಹೋದವರು, ಲಿಂಗವೇ ಹಾಗಿರಲಿ, ಜಂಗಮನೆ ಹಾಗಿರಲಿ, ಸಾಮಾನ್ಯನೆ ಹಾಗಿರಲಿ ನನಗೆ ಎಲ್ಲರೂ ಒಂದೇ, ನಾನೂ ಲಿಂಗವನ್ನು ಮರು ಧರಿಸಲಾರೆ ಎಂದು ತಿರಸ್ಕರಿಸಿ ಬಿಡುತ್ತಾರೆ, ನಂತರ ಬಸವಾದಿ ಅನೇಕ ಶರಣರ ಒತ್ತಾಯದ ಮೇರೆಗೆ ಮಣಿದು ಚಂದಯ್ಯ ಲಿಂಗ ಧಾರಣೆ ಮಾಡುತ್ತಾರೆ,

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ. ಇಷ್ಟು ಗಮನಾರ್ಹ ವಿಷಯ ನಡೆಯುತ್ತಿದ್ದರೂ ಚಂದಯ್ಯನವರು ಒಂದು ಕ್ಷಣವೂ ಸುಮ್ಮನಿರದೆ ತನ್ನ ನುಲಿಯುವ ಕಾಯಕವನ್ನು ಮಾಡುತ್ತಲೇ ಇರುತ್ತಾರೆ. ನುಲಿಯ ಚಂದಯ್ಯ ಹಾಗೂ ಇನ್ನೊಬ್ಬ ಶರಣ ಆಯ್ದಕ್ಕಿ ಮಾರಯ್ಯನ ಕಾಯಕ ನಿಷ್ಠೆಯನ್ನು ಕಂಡ ಬಸವಣ್ಣನವರು, ಒಂದು ವಾಕ್ಯವನ್ನು ಉದ್ಗರಿಸುತ್ತಾರೆ. ಅದೇ ಕಾಯಕವೇ ಕೈಲಾಸ ಈ ಮಾತು ಬಸವಣ್ಣನವರಿಂದ ಬಂತು

(ಮತ್ತೊಂದು ಕಥೆಯಲ್ಲಿ ಲಿಂಗನ ಕೈಯ್ಯಲ್ಲಿ ಚಂದಯ್ಯ ಕಾಯಕ ಮಾಡಿಸಿ, ನಂತರ ಲಿಂಗ ಧಾರಣೆ ಮಾಡುತ್ತಾರೆ ಎಂದಿದೆ)

ಇದನ್ನು ನಾನು ಇಲ್ಲಿ ಒಪ್ಪುವುದಿಲ್ಲ ಕಾರಣ ಬಸವಣ್ಣನವರು ವೈದಿಕ ಧರ್ಮದ, ಮೂರ್ತಿ ಪೂಜೆಯನ್ನು, ಅವತಾರವನ್ನು, ದೇವರು ಮೈಮೇಲೆ ಬರುವುದನ್ನು , ಆಚಾರ ವಿಚಾರಗಳನ್ನು ದಿಕ್ಕರಿಸಿದವರು, 

ಇಷ್ಟ ಲಿಂಗವನ್ನು ಕುರುಹಾಗಿಟ್ಟುಕೊಂಡು ಆತ್ಮೋನ್ನತ ಪೂಜೆಯನ್ನು ಒಪ್ಪಿದವರು, ಬಸವಣ್ಣನವರು,ಆ ಪ್ರಸಂಗದಲ್ಲಿ. ಲಿಂಗ ಮಾನವ ರೂಪ ತಾಳಿ ಕಾಯಕ ಮಾಡಿದೆ ಎಂದಿದೆ....ಇದನ್ನು ನಾವು ಒಪ್ಪಿದರೆ ಬಸವಣ್ಣನವರ ಆದರ್ಶಗಳು ಮತ್ತು ತತ್ವಗಳನ್ನು ದುರ್ಬಲಗೊಳಿಸಿದಂತಾಗುತ್ತದೆ, ಮತ್ತು ನಾವೇ ಸ್ವಯಂ ಮೌಢ್ಯಚರಣೆ ಮಾಡಿದಂತಾಗುತ್ತೆ,

ಈ ಪ್ರಸಂಗ ನಡೆದ ಸ್ಥಳ ಹೂಳಲ್ಕೆರೆ ತಾಲೂಕು ನುಲೇನೂರು ಗ್ರಾಮ ಈ ಗ್ರಾಮ ಅಭಿವೃದ್ದಿಗಾಗಿ ಬಕ ಪಕ್ಷಿಯಂತೆ ಕಾಯುತ್ತಿದೆ, ಲಿಂಗ ಜಾರಿದ ಸ್ಥಳ ರಾಮತೀರ್ಥ. ಈಗ ಬಟಾ ಬಯಲಾಗಿದೆ,ಈ ಗ್ರಾಮದಲ್ಲಿ ಅಭಿವೃದ್ದಿ, ಮರಿಚಿಕೆಯಾಗಿದೆ, 

ಕುಳುವ ಭಾಷೆಯನ್ನಾಡುವ ಸಮುದಾಯಗಳ ಕಾಯಕ ನಿಷ್ಠೆಯನ್ನು ಜಗತ್ತಿಗೆ ಪರಿಚಯಿಸಿದ, ಇಂತಹ ಶರಣರ ಪುಣ್ಯಸ್ಥಳಗಳು ಅವನತಿ ಅಂಚಿಗೆ ಸರಿದಿರುವುದು..! ಇವುಗಳನ್ನು ಸರ್ಕಾರ ಗಮನಿಸದೆ ಇರುವುದು ನಿಜಕ್ಕೂ ವಿಪರ್ಯಾಸ..?

ಆತ್ಮೀಯ ಕುಳುವ ಬಂಧುಗಳೇ.... ಬನ್ನಿ ನಮ್ಮ ಸಮಾಜದ ಸರ್ವ ಶ್ರೇಷ್ಠ ಶರಣ ನುಲಿಯ ಚಂದಯ್ಯ ನವರ ಸ್ಥಳಗಳನ್ನು ಪುನರುಜ್ಜೀವನಗೊಳಿಸಿ ಅಭಿವೃದ್ಧಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸೋಣ....!  ಸಂಘಟಿತರಾಗೋಣ.....!


ಮುಂದಿನ ಭಾಗದಲ್ಲಿ ಚಂದಯ್ಯನವರ ಮತ್ತಷ್ಟು ಸ್ಥಳಗಳನ್ನು ಪರಿಚಯಿಸುತ್ತೇನೆ.

ಮುಂದುವರಿಯುತ್ತದೆ....✍️

ಗುರುವಲ್ಲದ ಗುರು ಪಡೆದದ್ದು ಕೇವಲ ದಕ್ಷಿಣೆ ಅಲ್ಲ ತುಳಿತಕ್ಕೊಳಗಾದವರ ಬದುಕು

ಕುಳುವ ವಾಣಿ ಸಂದೇಶ...✍️
ದ್ರೋಣ ಹಾಗೂ ಏಕಲವ್ಯನ ಸಂವಾದ ಮೊದಲನೇ ಭಾಗದಿಂದ ಮುಂದುವರೆದು..

ದ್ರೋಣಾಚಾರ್ಯರು ಆ ಬಾಲಕನನ್ನು ಉದ್ದೇಶಿಸಿ... 
ಅಯ್ಯಾ ನಿನ್ನ ಮಾತುಗಳನ್ನು ಕೇಳುತ್ತಿದ್ದರೆ ನೀನೊಬ್ಬ ಪ್ರಭುದ್ಧ ಮೇಧಾವಿಂತೆ ಎಲ್ಲಾ ವಿದ್ಯೆಗಳನ್ನು ಕರತಲಾಮಲಕ ಗೊಳಿಸಿಕೊಂಡಿರುವವನಂತೆ ಕಾಣುತ್ತೀಯ, ಆದರೆ,......? 

ನಿನ್ನ ವೇಷಭೂಷಣಗಳನ್ನು ನೋಡಿದರೆ ಸ್ವಲ್ಪ ಆಶ್ಚರ್ಯವಾಗುತ್ತಿದೆ, 

ನಿನ್ನ ಹೆಸರೇನು..? ನಿನ್ನ ತಂದೆ ಹೆಸರೇನು..? ನೀನು ಯಾವ ಕುಲದವನು..? ಯಾವ ದೇಶದವನು..? ನಿಮ್ಮ ವೃತ್ತಿಯೇನು..? ಸ್ವಲ್ಪ ವಿವರವಾಗಿ ತಿಳಿಸು.
ಏಕಲವ್ಯ ಅಷ್ಟೇ ನಾಜೂಕಾಗಿ, ವಿನಯದಿಂದ ಉತ್ತರಿಸುತ್ತಾನೆ, 

ಗುರುವರ್ಯ ನನ್ನ ಹೆಸರು ಏಕಲವ್ಯ, ನನ್ನ ತಂದೆ ಹೆಸರು ಹಿರಣ್ಯಧನು, ನಾನು ಕಾಡಿನಲ್ಲಿರುವ ನಿಷಾದ ಕುಲದ ಬೇಡ ಜನಾಂಗದವನು, ನಾವು ಜರಾಸಂಧನ ಆಡಳಿತದಲ್ಲಿರುವ ದೇಶದ ಅವಿಭಾಜ್ಯ ಅಂಗದಲ್ಲಿರುವ ಕಾಡಿನಲ್ಲಿ   ವಾಸಿಸುತ್ತಿರುವೇವು,..

ನಿಮ್ಮಲ್ಲಿ ನಾನು ವಿದ್ಯೆಗಾಗಿ ಬಂದಿದ್ದೇನೆ,.ದಯಮಾಡಿ ನನಗೆ ಬಿಲ್ವಿದ್ಯೆ ದಾನ ಮಾಡಿ.
ಇದನ್ನು ಕೇಳಿದ ದ್ರೋಣರಿಗೆ ಸ್ವಲ್ಪ ವಿಚಲಿತವಾಗುತ್ತದೆ, ಇವನ ಮಾತುಗಳನ್ನು ಕೇಳಿ ಕ್ಷಣ ಕಾಲ ಸುಮ್ಮನಿದ್ದು ನಂತರ,

ಏಕಲವ್ಯನನ್ನು ಉದ್ದೇಶಿಸಿ ಕೇಳುತ್ತಾರೆ ಮಗು..!      ಈ ವಿದ್ಯೆಗಳೆಲ್ಲವೂ ರಾಜ್ಯವನ್ನು ಆಳುವ ಕ್ಷತ್ರಿಯ ಕುಲದ ರಾಜಕುಮಾರರು ಮಾತ್ರ ಕಲಿಯಬೇಕಾಗಿದೆ,  ನೀವು ಇದನ್ನು ಕಲಿಯುವುದು ಮತ್ತು ಗುರುಕುಲಕ್ಕೇ ಬರುವುದು ಧರ್ಮ ವಿರೋಧವಾಗಿದೆ..? ಹೀಗೆ ಹೇಳುತ್ತಲೇ ಕ್ಷಣ ಕಾಲ ಮೌನವಾದ ದ್ರೋಣರು, ಮನಸ್ಸಿನಲ್ಲಿ ತಾನು ಕೊಟ್ಟ ಮಾತನ್ನು ನೆನಪಿಸಿಕೊಳ್ಳುತ್ತಾ ಮನಸ್ಸನ್ನು ಗಟ್ಟಿ ಮಾಡಿಕೊಂಡು ಸ್ವಲ್ಪ ಕಠೋರವಾಗಿಯೇ ಏಕಲವ್ಯ ನನ್ನು ಉದ್ದೇಶಿಸಿ.

ನಿನ್ಯಾವ ಆಧಾರದ ಮೇಲೆ ಈ ವಿದ್ಯೆಯನ್ನು ಕಲಿತುಕೊಂಡೆ.. ? ಕಾಡುಗಳಲ್ಲಿ ವಾಸ ಮಾಡುತ್ತ ಹುಳ ಒಪ್ಪಟೆಗಳನ್ನು, ಗೆಡ್ಡೆ ಗೆಣಸುಗಳನ್ನು ತಿನ್ನುತ್ತಾ, ಬೇಟೆಯಾಡಿ ಪ್ರಾಣಿಗಳನ್ನ ಮಾಂಸಹಾರವನ್ನು ಸೇವಿಸುವ ಹೀನ ಕುಲದ ವ್ಯಕ್ತಿಯಾದ ನೀನು, ಶ್ರೇಷ್ಠ ಕುಲದ ವ್ಯಕ್ತಿಗಳು ಕಲಿಯುವ ವಿದ್ಯೆಯನ್ನು ಯಾವ ಮಾನದಂಡದಿಂದ ಕಲಿತೆ...?  ನಿನಗೆ ನಿನ್ನ ಮಾತಾಪಿತ್ರರು ಇದನ್ನು ಹೇಳಲಿಲ್ಲವೇ…?

ಧರ್ಮ ವಿರೋಧಿ ಚಟುವಟಿಕೆಗಳಲ್ಲಿ ನಾವುಗಳು ಭಾಗಿಯಾದರೆ ನಿನಗೂ ನಮಗೂ ಸಂಕಷ್ಟ ತಪ್ಪಿದ್ದಲ್ಲ ಈ ಕೂಡಲೇ ನೀನಿಲ್ಲಿಂದ ಹೊರಡು, ತಿಳಿದೋ ತಿಳಿಯದೆ ಮಾಡಬಾರದ ತಪ್ಪನ್ನು ಮಾಡಿರುವೆ ಇಲ್ಲಿಂದ ಈಗಲೇ ಹೊರಡದಿದ್ದರೆ ಆಗು ಈ ವಿದ್ಯೆಯನ್ನೆಲ್ಲ ಮರೆಯದಿದ್ದರೆ ನಿನ್ನನ್ನು ಬಟರನ್ನು ಕರೆಸಿ ಸೆರೆಮನೆಗೆ ದೂಡುತ್ತೇನೆ. ನೀನು ನಿನ್ನ ಮಾತಾಪಿತ್ರರು ಕಠಿಣವಾದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇಲ್ಲಿಂದ ಈ ಕೂಡಲೇ ಹೊರಟು ಹೋಗು..ಎಂದು ಕಠಿಣವಾಗಿ, ಕಠೋರವಾಗಿ ಬಾಲಕನೆಲ್ಲದೆ ನಿಂದಿಸಿ ಬಿಡುತ್ತಾರೆ.

ಗುರುವರ್ಯ ನನಗೆ ಈ ಧರ್ಮ-ಕರ್ಮಗಳ ಅರಿವಿಲ್ಲ,.! ನಾನು ನಿಮ್ಮಲ್ಲಿ ಕೇವಲ ವಿದ್ಯೆ ಕಲಿಯಬೇಕೆಂಬ ಹಂಬಲದಿಂದ ಬಂದಿದ್ದೇನೆ ದಯಮಾಡಿ ಎಲ್ಲರಂತೆ ನನಗೆ ವಿದ್ಯೆಯನ್ನು ಕಲಿಸಿಕೊಡಿ…!
ಏಕಲವ್ಯನ ಈ ಮಾತನ್ನು ಕೇಳಿ ದ್ರೋಣಾಚಾರ್ಯರು ಮನಸ್ಸಿನಲ್ಲೇ ಮಮ್ಮಲ ಮರುಗುತ್ತಾ…."

ಹಿಂದೊಮ್ಮೆ ರಾಜರಿಗೆ ಅಲ್ಲದೆ ಬೇರೆ ಯಾರಿಗೂ ವಿದ್ಯೆಯನ್ನು ಕಲಿಸಿಕೊಡುವುದಿಲ್ಲ ಮತ್ತು ವಿಶೇಷವಾಗಿ ಅರ್ಜುನನನ್ನು ಜಗದ್ವಿಖ್ಯಾತ ಬಿಲ್ಲುಗಾರ ನನ್ನಾಗಿ ಮಾಡುತ್ತೇನೆ ಎಂದು ಶಪಥ ಮಾಡಿದ್ದನ್ನು ಮತ್ತೊಮ್ಮೆ ನೆನೆಯುತ್ತಾ., ಮನಸ್ಸನ್ನು ಗಟ್ಟಿ ಮಾಡಿಕೊಂಡು ಏಕಲವ್ಯನ ಮನವಿಯನ್ನು ತಿರಸ್ಕರಿಸಿಬಿಡುತ್ತಾರೆ"

“ಇಲ್ಲ ಇಲ್ಲ ನಿನಗೆ ವಿದ್ಯೆಯನ್ನು ಕಲಿಸಲಾಗುವುದಿಲ್ಲ ನಿಮ್ಮ ಜನಾಂಗಕ್ಕೆ ಗುರುಕುಲ ಧರ್ಮ ವಿರೋಧ,, ಇಲ್ಲಿಂದ ಹೊರಟು ಬಿಡು ನಮ್ಮಿಬ್ಬರ ಸಂಭಾಷಣೆಯನ್ನು ಬೇರೆ ಯಾರಾದರೂ ನೋಡಿದರೆ ಅನರ್ಥವಾದೀತು”, 

ಎಂದು ಕಠಿಣವಾಗಿ ನುಡಿದು ಭಾರವಾದ ಮನಸ್ಸಿನಿಂದ ಹೊರಟು ಹೋಗುತ್ತಾರೆ.. 

ಇತ್ತ ನಿರಾಸೆಯಿಂದ.., ಒಲ್ಲದ ಮನಸ್ಸಿನಿಂದ.., ಹೆಜ್ಜೆಯ ಮೇಲೆ ಹೆಜ್ಜೆಗಳನ್ನು ಇಡುತ್ತಾ.., ಕಣ್ಣಿನಲ್ಲಿ ನೀರನ್ನು ಜಿನುಗಿಸುತ್ತಾ,...                            ಏಕಲವ್ಯ ಮರಳಿ ಮನೆಗೆ ಬರುತ್ತಾನೆ, 

ಎರಡು ಮೂರು ದಿನಗಳ ನಂತರ ಏಕಲವ್ಯನಲ್ಲಿ ದಿಡೀರನೆ ಬದಲಾವಣೆಗಳು ಕಾಣುತ್ತವೆ, ಗೆಳೆಯರೊಂದಿಗೆ ಆಟವಾಡಲು ಹೋಗುವುದಿಲ್ಲ ಅಸ್ತ್ರ, ಶಸ್ತ್ರಭ್ಯಾಸಗಳಿಗೆ ಹೋಗುವುದಿಲ್ಲ, ಸರಿಯಾಗಿ ಊಟವನ್ನು ಮಾಡುವುದಿಲ್ಲ, ಮುಖದಲ್ಲಿ ಕಳೆಗುಂದತೊಡಗುತ್ತದೆ, ಕುಂತಲ್ಲೇ ಕುಳಿತುಬಿಡುತ್ತಾನೆ, ತದೇಕಚಿತ್ತದಿಂದ ಆಗಾಧವಾಗಿ, ಯೋಚಿಸುತ್ತಾ, ಯಾವುದೊ ಹೊರ ಹಾಕದೆ ಚಿಂತಿಸುತ್ತಿರುತ್ತಾನೆ… 
ದಿಡೀರನೆ ತನ್ನ ಮಗನಲ್ಲಿ ಆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಕಂಡ ಹಿರಣ್ಯಧನು ಮಗನಲ್ಲಿ ಬಂದು ಕೇಳುತ್ತಾನೆ…

ಮಗು ಏಕಲವ್ಯ ಯಾಕೀ ವಿಪರೀತ ಯೋಚನೆ,.? ಯಾಕೀ ಬದಲಾವಣೆ..? ನಿಮ್ಮ ತಂದೆಯಾಗಿ ನಾನಿದನ್ನು ಕೇಳಬಹುದೇ,

ನಿನ್ನೀ ದುಗುಡಕ್ಕೇ ಕಾರಣವೇನು ಮಗು..?

ಅಪ್ಪ ನಾವು ಮನುಷ್ಯರಲ್ಲವೇ..? ನಾವು ಈ ಭೂಮಿಯ ಮೇಲಿನ ವಾರಸುದಾರರಲ್ಲವೇ..? ನಮಗೆ ಈ ಪ್ರಕೃತಿಯ ಮೇಲೆ ಅಧಿಕಾರವಿಲ್ಲವೆ..? ನಾವು ಗುರುಕುಲದಲ್ಲಿ ಶಿಕ್ಷಣ ಕಲಿಯಬಾರದೆ..? ನಮ್ಮ ಮೈಯಲ್ಲಿ ಹರಿಯುತ್ತಿರುವುದು ರಕ್ತವಲ್ಲವೇ..?ನಮ್ಮ ಜನಾಂಗ ಮಾಡಿದ ಅಪರಾಧವಾದರೂ ಏನು..? 

ಹನ್ನೆರಡು ಹದಿಮೂರು ವರ್ಷದ ಹಾಲುಗಲ್ಲದ ಕಂದಮ್ಮ, ಕಲ್ಮಶವಿಲ್ಲದ, ಕಪಟವರಿಯದ, ಮನಸ್ಸಿನಿಂದ ಆಡಿದ ಈ ಮಾತುಗಳನ್ನು ಕೇಳಿ ತಕ್ಷಣವೇ ಹಿರಣ್ಯಧನು ದಿಗ್ಭ್ರಾಂತನಾಗಿ ಬಿಡುತ್ತಾನೆ…? 

ಏನು ಉತ್ತರಕೊಡಬೇಕೆಂದು ತೋಚದೆ ಕ್ಷಣಕಾಲ ಮೌನವಾಗಿ ಬಿಡುತ್ತಾನೆ..?
ಹಿರಣ್ಯದನು ಹಾಗೂ ಏಕಲವ್ಯ ಸಂವಾದ ಮುಂದುವರೆದ ಭಾಗದಲ್ಲಿ.

ಮುಂದುವರೆಯುತ್ತದೆ…….

Monday, October 16, 2023

ಕುಳುವ ವಾಣಿ ಪರಿಚಯ

ಬುಟ್ಟಿಯೊಳಗಣ ಬುತ್ತಿ…..✍️.
ಶ್ರೀಕಾಂತ್ ಕುಳುವ

ನಮ್ಮ ದೇಶ ಬಹು ಸಂಸ್ಕೃತಿಯ ತವರೂರು, ಇಲ್ಲಿನ ಗರಡಿಯಲ್ಲಿ ಬೆಳೆದ ಎಷ್ಟು ಕಲಾವಿದರು ನಾನಾ ದೇಶಗಳಲ್ಲಿ, ನಾನಾ ಕಲೆಗಳಿಂದ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ, ನಮ್ಮ ಈ ದೇಶದ ಬಹುಸಂಸ್ಕೃತಿಯ ಬೆಳಕಿನ ಹಿಂದೆ ದುಃಖ, ಹಸಿವು, ತ್ಯಾಗ, ನಿರಂತರ ಶ್ರಮ, ಸಹನೆಯ ಕರಾಳಮುಖ ಇರುವುದು ಮೇಲ್ನೋಟಕ್ಕೆ ಕಾಣಸಿಗುವುದಿಲ್ಲ,..

ನಮ್ಮ ಮೂಲ ಸಂಸ್ಕೃತಿಯ ಅನಾವರಣ ಮತ್ತು ಇದರ ಹಿಂದಿರುವ ಕರಾಳ ಛಾಯೆಯನ್ನು ಲೋಕಾರ್ಪಣೆ ಗೊಳಿಸುವುದು,...
12 ನೇ ಶತಮಾನದಲ್ಲಿ ಬಸವಣ್ಣನವರ ಉಪಸ್ಥಿತಿಯಲ್ಲಿ ಸಮಾನ ಸಮಾಜದ ಕ್ರಾಂತಿಯನ್ನೇ ಹುಟ್ಟುಹಾಕಿದ ತಳಸಮುದಾಯಗಳ ಶರಣ-ಶರಣೆಯರು ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಅಪಾರ, ಅವರ ವಚನಗಳು ಅದರ ಅರ್ಥ, ಗೂಡಾರ್ಥ, ಅರಿತುಕೊಂಡರೆ ನಾವೆಲ್ಲರೂ ಸೇರಿ ಸಮಾನ ಸಮಾಜವನ್ನೇ ಕಟ್ಟಬಹುದು,..  ಅಂತಹ ಶಿವಶರಣರ ಜೀವನಚರಿತ್ರೆಯನ್ನು ಒಂದೊಂದಾಗಿ ನಿಮ್ಮ ಮುಂದೆ ತರುವ ಸಣ್ಣ ಪ್ರಯತ್ನ ಜೊತೆಗೆ..
ಆರ್ಥಿಕವಾಗಿ ಸಾಮಾಜಿಕವಾಗಿ ಮೂಲಭೂತ ಸೌಕರ್ಯವಿಲ್ಲದ, ಅನೇಕ ಪ್ರತಿಭೆಗಳು ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಎಲೆಮರೆ ಕಾಯಿಯಂತೆ ಅಡಗಿ ಕುಳಿತಿರುವ ಉದಯೋನ್ಮುಖ ಕಲಾವಿದರನ್ನು ಗುರುತಿಸುವುದು, ಮತ್ತು ಪರಿಚಯಿಸುವುದು, ಸಾಮಾಜಿಕ ಸಮಾಜಕ್ಕೆ ಉಪಯೋಗವಾಗುವ ಸಂಘ ಸಂಘಟನೆಗಳ ಕಾರ್ಯ ವೈಖರಿಗಳನ್ನು ತಿಳಿಸುವುದು.. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಲೆಮಾರಿ ಅರೆ ಅಲೆಮಾರಿ ಬುಡಕಟ್ಟು ಜನಾಂಗಗಳ ಸಮಾಜಕ್ಕೆ ಅಗತ್ಯವಿರುವ ಶಿಕ್ಷಣ, ಭದ್ರತೆ, ಮೂಲಭೂತ ಸೌಕರ್ಯಗಳನ್ನು, ಸರ್ಕಾರದ ಯೋಜನೆಗಳನ್ನು ಪಡೆಯುವ ಬಗ್ಗೆ ಜೊತೆಗೆ ಸಣ್ಣ ಸಣ್ಣ ಕಥೆ, ಮಕ್ಕಳ ಕಥೆ,... ಮತ್ತಿತರ ಮನರಂಜನೆಗಳ ನೀಡುವ ಪ್ರಯತ್ನವೇ
ನಮ್ಮ "ಕುಳುವ ವಾಣಿ" ಉದ್ದೇಶ.. 

ಆತ್ಮೀಯತೆಯಿಂದ ಸ್ವೀಕರಿಸುತ್ತೀರಿ ಎಂಬ ನಂಬಿಕೆಯೊಂದಿಗೆ ನಿಮ್ಮ ಮುಂದೆ ಬಂದಿದ್ದೇವೆ.....

ಭಾರತ ದೇಶದ ಇತಿಹಾಸದ ಪೂರ್ವದಲ್ಲಿ ಮಹಾಭಾರತ ನಡೆಯಿತು ಎನ್ನಲಾದ ಕಥೆಗಳು, ಕಾಲಕ್ರಮೇಣ ಜನರಿಂದ ಜನರಿಗೆ ಸಾಗುತ್ತಾ,.. ಸಾಗುತ್ತಾ,.. ತನ್ನ ಮೂಲ ಹೊಳಪನ್ನು, ಕಳೆದುಕೊಂಡು, ಹೊಸ ಹುರುಪಿನೊಂದಿಗೆ ಪಳಪಳನೆ ಹೊಳೆಯುತ್ತಿದ.
ನಿಷಾದ ಕುಲ ಸುಪುತ್ರನಾದ ಏಕಲವ್ಯನ ಕಥೆ ಇದಕ್ಕೆ ಹೊರತಾಗಿಲ್ಲ ಕಾಲಗರ್ಭದಲ್ಲಿ ಮೂಲ ಹೊಳಪನ್ನು ಅಡಗಿಸಿ ಕಾಲಾಂತರದಲ್ಲಿ ಹೊಸ ಹುರುಪಿನೊಂದಿಗೆ ನಮ್ಮೆಲ್ಲರ ಕಣ್ಣಮುಂದಿರುವ "ಏಕಲವ್ಯನ" ಹಿಂದಿರುವ ಜೀವನ, ಪರಿಶ್ರಮ, ಮತ್ತು ತ್ಯಾಗ,.. ಸಾಮಾನ್ಯವಾದುದಲ್ಲ.
"ಏಕಲವ್ಯ ಕೊಟ್ಟಿದ್ದು ಕೇವಲ ಬೆರಳಲ್ಲ, ಗುರುವಲ್ಲದ ಗುರು ಎನಿಸಿಕೊಂಡ ದ್ರೋಣಾಚಾರ್ಯರು ಪಡೆದದ್ದು ಕೇವಲ ದಕ್ಷಿಣೆಯಲ್ಲ... 

ಇದರ ಮೂಲ ಅರಿವನ್ನು ತಿಳಿಸುವ ಒಂದು ಸಣ್ಣ ಪ್ರಯತ್ನ..
ಏಕಲವ್ಯನ ಜೀವನ ಚರಿತ್ರೆ,.
ಮುಂದುವರೆಯುತ್ತದೆ...

Sunday, October 15, 2023

"ಏಕಲವ್ಯ ಕೊಟ್ಟಿದ್ದು ಕೇವಲ ಬೆರಳಲ್ಲ, ಗುರುವಲ್ಲದ ಗುರು ಎನಿಸಿಕೊಂಡ ದ್ರೋಣಾಚಾರ್ಯರು ಪಡೆದದ್ದು ಕೇವಲ ದಕ್ಷಿಣೆಯಲ್ಲ"

ಕುಳುವ ವಾಣಿ ಸಂದೇಶ...✍️

"ಏಕಲವ್ಯ ಕೊಟ್ಟಿದ್ದು ಕೇವಲ ಬೆರಳಲ್ಲ, ಗುರುವಲ್ಲದ ಗುರು ಎನಿಸಿಕೊಂಡ ದ್ರೋಣಾಚಾರ್ಯರು ಪಡೆದದ್ದು ಕೇವಲ ದಕ್ಷಿಣೆಯಲ್ಲ... 
ಇದರ ಮೂಲ ಅರಿವನ್ನು ತಿಳಿಸುವ ಒಂದು ಸಣ್ಣ ಪ್ರಯತ್ನ..

ನಿಷಾದ ಕುಲದ ಏಕಲವ್ಯನ ಮುಂದಿನ ಪೀಳಿಗೆಯವರು, ಭಾರತ ದೇಶಾದ್ಯಂತ ಹರಡಿದ್ದು ಇವರು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಕಂಡುಬರುತ್ತಾರೆ, ಈಗಿನ ಆಂಧ್ರಪ್ರದೇಶದಲ್ಲಿರುವ ಏರುಕುಲ ಅಥವಾ ಯೆರವಕುಲಂ ಜಾತಿಯವರಾಗಿ ಗುರುತಿಸಲ್ಪಡುತ್ತಾರೆ,
(ಕರ್ನಾಟಕದಲ್ಲಿ ಕೊರಚ ಕೊರಮರು ಇದೇ ಪೀಳಿಗೆಯವರಾಗಿದ್ದು ಕರ್ನಾಟಕದತ್ತ ವಲಸೆ ಬಂದಿದ್ದಾರೆ ಎಂದು ಕೆಲವು ಸಂಶೋಧನೆಗಳ ಪ್ರಕಾರ ತಿಳಿಯಲ್ಪಡುತ್ತದೆ) 
ಇವರು ಈಗಲೂ ತಮ್ಮ ಕುಲಕಸುಬನ್ನು ಮಾಡುವಾಗ ಮತ್ತು ಸಣ್ಣಪುಟ್ಟ ಬೇಟೆಗೆ ಹೋದಾಗ ಹೆಬ್ಬೆರಳನ್ನು ಉಪಯೋಗಿಸದೆ ಇರುವುದು ಈತನ ವಂಶಸ್ಥ ಮಹಾನ್ ವ್ಯಕ್ತಿ "ಏಕಲವ್ಯನಿಗೆ" ಕೊಡುವ ಗೌರವ ಸೂಚಕವಾಗಿದೆ,.. 

ಕ್ರಿಸ್ತ ಪೂರ್ವದಲ್ಲಿ ದಕ್ಷಿಣ ಭಾರತದ ಕಡೆ ಅನೇಕ ಬುಡಕಟ್ಟು ಜನಾಂಗಗಳಿದ್ದು ಅದರಲ್ಲಿ "ನಿಷಾದ" ಕುಲವು ಒಂದು 
ನಿಷಾದ ಕುಲದ ನಾಯಕನಾದ.
ಹಿರಣ್ಯಧನು ಮತ್ತು ಶ್ರಾದ್ಧ ದಂಪತಿಯ ಮಗನೇ 
" ಏಕಲವ್ಯ "
(ಕೆಲವು ಕತೆಗಳ ಪ್ರಕಾರ ಏಕಲವ್ಯ ಹಿರಣ್ಯ ಧನುವಿನ ದತ್ತುಪುತ್ರ ಎಂದು ತಿರುಚಿ ಬರೆಯಲಾಗಿದೆ,) ಎಲ್ಲರಂತೆ ಏಕಲವ್ಯ ತನ್ನ ಕಾಡಿನಲ್ಲಿ ಆಡುತ್ತಾ ಆಟವಾಡುತ್ತಾ ಬೆಳೆಯುತ್ತಿದ್ದ, 
ಎಲ್ಲದರಲ್ಲೂ ಅತಿ ಹೆಚ್ಚು ತೀಕ್ಷ್ಣತೆಯನ್ನು ಹೊಂದಿದ್ದ, ಯಾವುದೇ ವಿದ್ಯೆಯಾಗಲಿ ಯಾವುದೇ ಕಲೆಯಾಗಲಿ, ಯುದ್ಧವಾಗಲಿ, ಬೇಟೆಯಾಗಲಿ, ಕ್ಷಣದಲ್ಲಿ ಕಲಿಯುತ್ತಿದ್ದ, ಬೆಳೆಯುತ್ತ ಬೆಳೆಯುತ್ತ ಈತ ಕಲಿತದ್ದು ಯಾವುದು ಇವನಿಗೆ ಉತ್ರ್ಪೆಕ್ಷೆ ಎನಿಸಲಿಲ್ಲ, 

ಇನ್ನೂ ಹೆಚ್ಚಿನದು ಯಾವುದನ್ನಾದರೂ ಕಲಿಯಬೇಕೆಂಬ ಆಸೆ ಇವನಲ್ಲಿ ಹೆಪ್ಪುಗಟ್ಟಿತ್ತು,..
 ಒಂದು ಸಾರಿ ಹೀಗೆ ಕಾಡು ಸುತ್ತುತ್ತ ಊರಿನ ಕಡೆ ಬಂದಾಗ ಊರ ಹೊರಗಡೆ ದ್ರೋಣಾಚಾರ್ಯರು ಪಾಂಡವರು ಮತ್ತು ಕೌರವರಿಗೆ ಯುದ್ಧ, ಮತ್ತು ರಕ್ಷಣಾ ಕೌಶಲ್ಯ ವಿದ್ಯೆ ಹೇಳಿಕೊಡುತ್ತಿದ್ದ ದ್ದನ್ನು ನೋಡಿದ..! ಅವರು ವಿದ್ಯೆಯನ್ನು ಕಲಿಯುತಿದ್ದ ರೀತಿಗಳನ್ನು ನೋಡಿದ..! ಎಲ್ಲ ವಿದ್ಯೆಯನ್ನು ತನ್ನ ಮನಸ್ಸಿನಲ್ಲಿ ಅಡಗಿಸಿಕೊಂಡ, ನಂತರ ತನ್ನ ಹಟ್ಟಿಗೆ ವಾಪಸಾದ ವಿದ್ಯೆಗಳನ್ನು ತಾನೇ ಕಲಿಯುತ್ತಾ ಕಲಿಯುತ್ತಾ ಬಂದ… 
ಅಲ್ಲಿ ದೂರದಿಂದ ನೋಡುವುದು, ಇಲ್ಲಿ ಬಂದು ಕಲಿಯುವುದು.. ಎಲ್ಲಾ ವಿಧ್ಯೆಯಲ್ಲು ಪಾರಂಗತನಾದ… 
ಆದರೂ.... ಅವನಿಗೆ ಮತ್ತಷ್ಟು ಏನಾದರೂ ಸಾದಿಸಲೇ ಬೇಕೆಂಬ ಹಂಬಲ ಹೆಚ್ಚುತ್ತಲೇ ಹೋಯಿತು.. 
ಒಮ್ಮೆ ದ್ರೋಣರನ್ನು ಭೇಟಿಯಾದ, ಅವರನ್ನು ತನ್ನ ಮನಸ್ಸಿನ ತುಂಬಾ ಗುರುವನ್ನಾಗಿ ಸ್ವೀಕರಿಸಿಕೊಂಡ, ಅವರಲ್ಲಿ ನಯವಾಗಿ ಅತಿ ವಿನಯವಾಗಿ ಕೀರಲು ದ್ವನಿಯಲ್ಲಿ ಅವರನ್ನು ಉದ್ದೇಶಿಸಿ ತನ್ನ ಮನದ ಹಂಬಲವನ್ನು ಅವರಲ್ಲಿ ತೋಡಿಕೊಂಡ.

ಗುರುವರ್ಯ ನಾನು.. ನಾನು.. ಮಲ್ಲಯುದ್ಧ, ದೃಷ್ಟಿಯುದ್ಧ,ಗದಾಯುದ್ಧ, ಕತ್ತಿವರಸೆ, ಕುದುರೆ ಸವಾರಿ, ಬಿಲ್ವಿದ್ಯಾ, ಭರ್ಜಿ ಎಸೆತದಂತ, ಅನೇಕ ವಿದ್ಯೆಗಳನ್ನು ಕಲಿತಿದ್ದೇನೆ.
 ಆದರೆ ಬಿಲ್ವಿದ್ಯೆ ಯಲ್ಲಿ ನಾನಿನ್ನೂ ಪರಿಪೂರ್ಣನಾಗಿಲ್ಲ, ಈ  ವಿದ್ಯೆಯನ್ನು ಕಲಿಯಬೇಕೆಂಬ ಹಂಬಲ ಹೆಚ್ಚುತ್ತಿದೆ.
ಬಿಲ್ವಿದ್ಯೆಯನ್ನು ಎಷ್ಟು ಕಲಿತರು ಮತ್ತಷ್ಟು ಕಲಿಯಬೇಕೆಂಬ ಆಸೆಯಾಗುತ್ತಲೆ ಇದೆ...
ದಯಮಾಡಿ ನೀವು ನನಗೆ ಈ ವಿದ್ಯೆಯನ್ನು ಸಂಪೂರ್ಣವಾಗಿ ಹೇಳಿ ಕೊಡಿ…
ಕೀರಲು ಧ್ವನಿಯಲ್ಲಿ ತನ್ನ ಮನದ ಇಂಗಿತವನ್ನು ಅವರಲ್ಲಿ ತೋಡಿಕೊಂಡ.

ಆಗ ದ್ರೋಣರು ಅರ್ಜುನನಿಗೆ "ಶಬ್ದವೇಧಿ" ಯನ್ನು ಕಲಿಸುತ್ತಿದ್ದ ಸಮಯ. 
ಒಮ್ಮೆ ಏಕಲವ್ಯನ ಕಡೆ ತಿರುಗಿ ನೋಡಿ ಅವನ ಮುಖದಲ್ಲಿ ಇದ್ದ ನಿರಾಳತೆ, ಮುಗ್ಧತೆ, ಹಾಲುಗಲ್ಲದ, ಚಿಗುರು ಮೀಸೆಯ, ಬಟ್ಟಲಗಲದ ಹಸುಳೆ ಕಣ್ಣಿನಲ್ಲಿ, ವಿಶ್ವವನ್ನೇ ಗೆಲ್ಲೆನೆಂಬೇ ಅಪರಿಮಿತ ಆತ್ಮವಿಶ್ವಾಸ, ತನ್ನ ದೇಹದಲ್ಲಿನ ಒಂದು ಅಂಗವೆಂಬಂತೆ, ಎದೆಗೆರಿಸಿದ ಬಿಲ್ಲು, ಹರುಳು ಉರಿದಂತೆ ಪಟಪಟನೆ ಉದುರಿಸಿದ ನುಡಿಮುತ್ತುಗಳು,
ಇವೆಲ್ಲವನ್ನು ಕಂಡು ಮನದಲ್ಲಿ ಹರುಷಗೊಂಡರು, ಅದನ್ನು ತೋರ್ಪಡಿಸದೆ ಅವನ ಅಂಗಾಂಗಗಳನ್ನು ಸೂಕ್ಷ್ಮವಾಗಿ ಗಮನಿಸಿದರು, ಇವನಿಗೆ ಶಿಕ್ಷಣ ಕೊಟ್ಟರೆ
ಇವನೊಬ್ಬ ಉತ್ತಮ ಚಕ್ರವರ್ತಿಯಾಗುವ ಎಲ್ಲಾ ಲಕ್ಷಣಗಳು ಇವೆಯಲ್ಲ, 
ಎಂದು ಮನದಲ್ಲೇ ಅರುಹಿಕೊಂಡರು,

ದ್ರೋಣ ಹಾಗೂ ಏಕಲವ್ಯನ ಸಂವಾದ ಮುಂದುವರೆದ ಭಾಗದಲ್ಲಿ....

Thursday, October 12, 2023

ಅಲೆಮಾರಿ ಸಮುದಾಯಗಳಲ್ಲಿ ಕೊರಮ-ಕೊರಚ ಭಾಗ-2

ಕುಳುವ ವಾಣಿ ಸಂದೇಶ....✍️
ಭಾಗ:- 2 
ಅಲೆಮಾರಿ ಬುಡಕಟ್ಟು ಜನಾಂಗದ ಸ್ಥಿತಿ,ಗತಿ, ಕಲೆ, ಸಂಸ್ಕೃತಿ, ಜೀವನಶೈಲಿ, ಅನಾವರಣಗೊಳಿಸುವ ನಿಟ್ಟಿನಲ್ಲಿ ಒಂದು ಇಣುಕುನೋಟ, 
ಇದುವೇ #ಕುಳುವ_ವಾಣಿಯ ಉದ್ದೇಶ...

ಭಾಗ:- 2 ಮುಂದುವರಿದು.....

ಮೊದಲಿಗೆ ಕರ್ನಾಟಕದಲ್ಲಿ ಕೊರಮ ಹಾಗೂ ಕೊರಚ ಸಮುದಾಯದ ಸಣ್ಣ ಮಾಹಿತಿ ಹಂಚಿಕೊಳ್ಳೋಣ,
2011 ಜನಗಣತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಒಟ್ಟು ಕೊರಚರು 55000,
ಕೊರಮರು 2,09000, ಲೆಕ್ಕಕ್ಕೆ ಸಿಕ್ಕಿದೆ 
(ಲೆಕ್ಕಕ್ಕೆ ಸಿಗದದ್ದು ಮತ್ತಷ್ಟು ಇದೆ, ಒಂದು ಅಂದಾಜು 15 ಲಕ್ಷ ದಾಟುತ್ತೆ,, ಕಾರಣ ಮುಂದೆ ತಿಳಿಸುತ್ತೇನೆ),

ಕರ್ನಾಟಕ ರಾಜ್ಯ ಜಾತಿ ಪಟ್ಟಿಯಲ್ಲಿ #ಕೊರಮ #ಕೊರಚ ಎಂದಿದೆ,
(ಉಪನಾಮಗಳು ಕೊರಮ, ಕೊರಮ ಶೆಟ್ಟಿ, ಕೋತಿ ಕೊರಮ, ಭಜಂತ್ರಿ, ಕೊರವ, ಕುಂಚಿ ಕೊರಮ, ಕುಂಚಿ ಕೊರಚ, ಕುರುವನ್, ಕೇಪ್ ಮಾರಿಸ್, ವಾಜಂತ್ರಿ, ಕೊರವಿ, ಕೊರವಂಜಿ, ಕುಳುವ,)

#ಕುಲ (ಬೆಡಗು):-. 
#ಕಾವಾಡಿ, #ಸಾತ್ಪಾಡಿ, 
ದಕ್ಷಿಣ ಕರ್ನಾಟಕದಲ್ಲಿ,
#ಕಾವಾಡಿ, #ಸಾತ್ಪಾಡಿ, #ಮೆನ್ಪಾಡಿ, #ಮೆನ್ರುಗುತಿ

#ಐತಿಹಾಸಿಕ_ಹಿನ್ನೆಲೆ:-
ಇವರು ಭಾರತದ ಮೂಲನಿವಾಸಿಗಳಾಗಿದ್ದು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ ದ್ರಾವಿಡ ಸಂಸ್ಕೃತಿಯನ್ನು ಹೆಚ್ಚಾಗಿ ಅವಲಂಬಿಸಿರುವುದರಿಂದ ದಕ್ಷಿಣ ಭಾರತದ ಪ್ರದೇಶಗಳ ಬುಡಕಟ್ಟು ಜನಾಂಗದವರು ಇರಬೇಕು ಎಂದು ಅಂದಾಜಿಸಲಾಗಿದೆ ರಾಮಾಯಣ ಮಹಾಭಾರತ ಗ್ರಂಥಗಳಲ್ಲಿ ಮತ್ತಿತರ ಪೌರಾಣಿಕ ಕಥೆಗಳಲ್ಲಿ ಈ ಸಮಾಜದ ಉಲ್ಲೇಖ ಲಭ್ಯವಿದೆ,

#ವೃತ್ತಿ:-
ಕುಲಕಸುಬು, ಬಿದಿರಿನ ಕೆಲಸ ಮಾಡುವುದು, ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಹಗ್ಗ ನುಲಿಯುವುದು ಬಾಜಾಭಜಂತ್ರಿ ಬಾರಿಸುವುದು, ಜೊತೆಗೆ ಶಹನಾಯಿ ನುಡಿಸುವುದು, ಹಾವು ಆಡಿಸುವುದು, ಕೋತಿ ಆಡಿಸುವುದು, ಕಣಿ ಹೇಳುವುದು, ಬೀದಿ ಬದಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವುದು, ಹಚ್ಚೆ ಹೊಯ್ಯುವುದು, ಪಶು ಸಾಕಾಣಿಕೆ ವಿಶೇಷವಾಗಿ #ಹಂದಿ ಸಾಕಾಣಿಕೆ
(ಹಿಂದೆ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಊಟ ಮಾಡಿ ಜೀವನ ಸಾಗಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ)

ಬೇರೆ ರಾಜ್ಯಗಳಲ್ಲಿ ಈ ಜನಾಂಗ:-
ಆಂಧ್ರದಲ್ಲಿ: #ಯೆರುಕುಲ, #ಏರ್ರುಕುಲಂ,
ತಮಿಳುನಾಡಿನಲ್ಲಿ: #ಕುರುವನ್, #ಪಾಂಡಿಚೇರಿ_ಕುರುವನ್,
ಮಹಾರಾಷ್ಟ್ರದಲ್ಲಿ: #ಕೈಕಾಡಿ, #ಜಾದವ್,
ಕೇರಳದಲ್ಲಿ: #ಕೊರವನ್, #ಮಲೈ_ಕೊರವನ್
ರಾಜಸ್ಥಾನದಲ್ಲಿ: #ಕೀರ್
(ಮಧ್ಯಪ್ರದೇಶಗಳನ್ನು ಈ ಜನಾಂಗವಿದ್ದು ಅವರ ಬಗ್ಗೆ ಸ್ವಲ್ಪ ಸಂಶೋಧನೆ ನಡೆಸಬೇಕಿದೆ)
#ಮೂಲನೆಲೆ ಮತ್ತು #ವಲಸೆ:-
ಇವರ ಮೂಲ ನೆಲೆ ದಕ್ಷಿಣ ಭಾರತವಾಗಿದ್ದು ಒಂದು ಅಂದಾಜಿನ ಪ್ರಕಾರ ಈಗಿನ ಆಂಧ್ರ, ತಮಿಳುನಾಡಿನ ಪಾಂಡಿಚೇರಿ, ಕುಂಬಕೋಣಂ ಮತ್ತಿತರ ಗುಡ್ಡಗಾಡು ಪ್ರದೇಶದಿಂದ ಭಾರತದಾದ್ಯಂತ ವಲಸೆ ಬಂದಿರಬಹುದು...

#ಭಾಷೆ:
ಲಿಪಿಯಿಲ್ಲದ ತಮಿಳು ಮತ್ತು ತೆಲುಗು ಮಿಶ್ರಿತ ಭಾಷೆ #ಕುಳುವ ಭಾಷೆ... ವಿಶೇಷವೆಂದರೆ ದೇಶದಾದ್ಯಂತ ಇರುವ ಎಲ್ಲಾ ರಾಜ್ಯದ ಈ ಸಮುದಾಯಗಳು ಇದೆ ಭಾಷೆಯನ್ನು ಬಳಸುತ್ತಿರುವುದು..

#ಬಲ ಮತ್ತು #ಶಕ್ತಿ
ಯಾವುದೇ ಭಾಷೆಯನ್ನು ಯಾವುದೇ ಕೆಲಸವನ್ನು ಸರಾಗವಾಗಿ, ವೇಗವಾಗಿ ಕಲಿತುಕೊಳ್ಳುವ ಚಾಣಾಕ್ಷತನ ಇವರಲ್ಲಿದೆ..

#ದುರ್ಬಲತೆ 
#ಶಿಕ್ಷಣ ಒಂದೆಡೆ ನಿಲ್ಲಲು #ಸೂರಿಲ್ಲ , ಒಟ್ಟಾರೆ ಭಾರತದ 100 ಪರ್ಸೆಂಟ್ ನಲ್ಲಿ 60% ರಷ್ಟು ಅವಿದ್ಯಾವಂತರು...
20% ಪರ್ಸೆಂಟ್ ವಿದ್ಯಾವಂತರು ಪಟ್ಟಣಗಳಲ್ಲಿ ಸೇರಿಕೊಂಡು ಸರ್ಕಾರಿ ಕೆಲಸದಲ್ಲಿ ನಿರತರಾಗಿ.
(ಅನ್ಯ ಜಾತಿಗಳಿಗೆ ಸೇರಿಕೊಂಡು ಅಥವಾ ಅನ್ಯ ಜಾತಿಗಳಿಂದ ನಮ್ಮ ಜಾತಿಯೊಳಗೆ ಸೇರಿಕೊಂಡು ಇರಬಹುದು,), 
ಸ್ಥಿತಿವಂತರಾಗಿದ್ದು ನಾವು ಅಸ್ಪೃಷ್ಯರಲ್ಲ ನಾವು ಸ್ಪರ್ಶ ರು ಎಂದು ಹೇಳಿಕೊಂಡು ತಿರುಗುತ್ತಿರುವುದು ಇವರ ದೌರ್ಬಲ್ಯ... 

ಈಗಲೂ ಹಳ್ಳಿಗಳಲ್ಲಿ ಸೂಕ್ತ #ಶಿಕ್ಷಣವಿಲ್ಲದೆ ಸೂಕ್ತ #ನೆಲೆ ಇಲ್ಲದೆ, ಪರದಾಡುತ್ತಿದ್ದಾರೆ, 
ನೂತನವಾಗಿ ಇವರ ಕಲ್ಯಾಣಕ್ಕಾಗಿ, ಪಶು ಸಾಕಾಣಿಕೆಯಂತ ಅನೇಕ ಯೋಜನೆಗಳನ್ನು ಹಿಂದಿನ ಸರ್ಕಾರಗಳು ಮಾಡಿದ್ದರು. ಅದನ್ನು ಪಡೆದುಕೊಳ್ಳಲಾಗದೆ ಅತಂತ್ರ ಸ್ಥಿತಿಯಲ್ಲಿರುವುದು ಇವರ ದೌರ್ಭಾಗ್ಯ..

#ಒಗ್ಗಟ್ಟು, #ಸಮರ್ಥ_ನಾಯಕತ್ವ, #ಸಮರ್ಥ_ಸಂಘಟನೆ 
ಇಲ್ಲದೆ ಇರುವುದು ಇವರ ಮತ್ತೊಂದು ದೌರ್ಭಾಗ್ಯ,,

(ಇತ್ತೀಚಿನ ದಿನಗಳಲ್ಲಿ ಇವರ ಕಲ್ಯಾಣಕ್ಕಾಗಿ Akhila Karnataka Kuluva MahaSangha ಎಂದು ಒಂದು ಸಂಘ ಸ್ಥಾಪನೆಯಾಗಿದ್ದು ಅದು ವೇಗವಾಗಿ ಹೆಚ್ಚು ಹೆಚ್ಚು ಸಕ್ರಿಯವಾಗಿ ಇವರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಈ ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ)

ಇನ್ನೂ ಹೆಚ್ಚು ಹೆಚ್ಚು ಮಾಹಿತಿಯೊಂದಿಗೆ ನಿಮ್ಮ ಮುಂದೆ ಬರುತ್ತೇನೆ... 
ಮುಂದಿನ ಭಾಗದಲ್ಲಿ.....

ಶ್ರೀಕಾಂತ್ ಕುಳುವ

Wednesday, October 11, 2023

ಅಲೆಮಾರಿ ಸಮುದಾಯಗಳಲ್ಲಿ ಕೊರಮ - ಕೊರಚ

 



ಕುಳುವ ವಾಣಿ ಸಂದೇಶ....✍️

ಅಲೆಮಾರಿ




ಅಲೆಮಾರಿ ಬುಡಕಟ್ಟು ಜನಾಂಗದ ಸ್ಥಿತಿ,ಗತಿ, ಕಲೆ, ಸಂಸ್ಕೃತಿ, ಜೀವನಶೈಲಿ, ಅನಾವರಣಗೊಳಿಸುವ ನಿಟ್ಟಿನಲ್ಲಿ ಒಂದು ಇಣುಕುನೋಟ, 


ಇದುವೇ #ಕುಳುವ_ವಾಣಿಯ ಉದ್ದೇಶ...




ಬುಡಕಟ್ಟು ಅಲೆಮಾರಿ ಸಮುದಾಯಗಳಲ್ಲಿ ಆರ್ಥಿಕ ಬಡತನವಿದೆ, ಆದರೆ ಸಾಂಸ್ಕೃತಿಕ ಶ್ರೀಮಂತಿಕೆ ಅಪಾರವಾಗಿ ಚಿಮ್ಮುತ್ತಿದೆ,, ವಿಶ್ವದಾದ್ಯಂತ ಸಾಂಸ್ಕೃತಿಕ ರಾಯಭಾರಿಯಂತೆ ಹೆಸರು ಮಾಡಿದ್ದರು,, ಈಗಲೂ ಬಡತನದ ಬೇಗೆ, ಅಸ್ಪೃಶ್ಯತೆ, ಅಸಮಾನತೆ, ಉದ್ಯೋಗ, ಶಿಕ್ಷಣ, ಆರ್ಥಿಕ, ವಂಚಿತ ಸಮುದಾಯಗಳಲ್ಲಿ ಒಂದು ಸಮುದಾಯವೇ....




ಕುಳುವ ಭಾಷೆಯನ್ನು(ಲಿಪಿ ಇಲ್ಲದ) ಮಾತೃಭಾಷೆಯನ್ನಾಗಿ ಮಾಡಿಕೊಂಡು, ಮೂಲ ಸಂಸ್ಕೃತಿಯನ್ನು ತನ್ನ ಒಡಲಾಳದಲ್ಲಿ ಚಿನ್ನದ ಗಣಿಯಂತೆ ಇಟ್ಟುಕೊಂಡು,, ಅಭಿವೃದ್ಧಿಗಾಗಿ ಬಕ ಪಕ್ಷಿಯಂತೆ ಕಾಯುತ್ತಿರುವ #ಕೊರಚ #ಕೊರಮ ಸಮುದಾಯ..!




ಈ ಸಮುದಾಯ ದೇಶಾದ್ಯಂತ ನೆಲೆಗೊಂಡಿದ್ದು, ಆಯಾಯ ರಾಜ್ಯದಲ್ಲಿ ,ಆಯಾಯ ಸಂಸ್ಕೃತಿ, ಕಲೆ, ಭಾಷೆ, ಜೀವನ ಶೈಲಿಯ ಜೊತೆಗೆ ತಮ್ಮ ಮೂಲ ಸಂಸ್ಕೃತಿಯನ್ನು, ಬೆರೆಸಿಕೊಂಡು ಬದುಕು ಕಟ್ಟಿಕೊಂಡಿವೆ,




ಮೂಲತಃ ಕರ್ನಾಟಕದಲ್ಲಿ ಕೊರಚ ಕೊರಮ ಸಮುದಾಯಗಳು 100% ನಲ್ಲಿ 10% ರಷ್ಟು ಪಟ್ಟಣಗಳಲ್ಲಿ ಅಭಿವೃದ್ಧಿ ಹೊಂದಿರುವುದು ಬಿಟ್ಟರೆ,, ಮಿಕ್ಕ 90% ಜನರು ಹಳ್ಳಿಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ, ನದಿ ದಡದಲ್ಲಿ, ಮತ್ತು ಕಾಡಂಚಿನಲ್ಲಿ, ಈಗಲೂ ಅವಕಾಶ ವಂಚಿತರಾಗಿ ವಾಸಿಸುತ್ತಿದ್ದಾರೆ,,,!




ಈ ಸಮುದಾಯದ ಜನ ಒಂದೇ ವೃತ್ತಿಯನ್ನು ಅವಲಂಬಿಸದೆ, ಅನೇಕ ವೃತ್ತಿಗೆ ಜೋತುಬಿದ್ದು ಎಲ್ಲಾ ವೃತ್ತಿಯಲ್ಲೂ ಪರಿಣಿತಿ ಹೊಂದಿರುವುದು, ವಿಶೇಷವೇ ಸರಿ,...


ಈ ಸಮುದಾಯದ ಕೆಲವು ವೃತ್ತಿಗಳು ಹೀಗಿವೆ,


ಬಿದಿರಿನ ಕೆಲಸ ಮಾಡುವುದು, ಬುಟ್ಟಿ, ಮೊರ, ಮಂಕರಿ, ಬಿದಿರಿನ ಚಾಪೆ, ರೇಷ್ಮೆ ತಟ್ಟೆ (ಚಂದ್ರಿಕೆ) ಹಂದಿ ಸಾಕಾಣಿಕೆ, ಬಾಜ ಭಜಂತ್ರಿ ಬಾರಿಸುವುದು, ಕಣಿ ಹೇಳುವುದು, ಬೀದಿ ಬದಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ...! 


ಪಟ್ಟಣಗಳಲ್ಲಿ ಅಭಿವೃದ್ಧಿ ಹೊಂದಿದ ಈ ಸಮುದಾಯದ ಜನ ಸರ್ಕಾರಿ ಕೆಲಸಗಳು, ಸೇನೆಯಲ್ಲಿ ಸೇವೆ ಸಲ್ಲಿಸುವುದು, ಮತ್ತಿತರ ಕೆಲಸಗಳನ್ನು ಮಾಡಿಕೊಂಡಿದ್ದಾರೆ,,


ಹಾಗೂ ವಿಶೇಷವಾಗಿ ಸಂಗೀತ ಕ್ಷೇತ್ರಗಳಲ್ಲಿ #ಸನಾದಿ_ಅಪ್ಪಣ್ಣ ರಂಥ ದಿಗ್ಗಜರನ್ನು ಕಾಣಿಕೆಯಾಗಿ ಕೊಟ್ಟಂತ ಹೆಗ್ಗುರುತು ಈ ಸಮಾಜಕ್ಕಿದೆ,, ಈ ಸಮುದಾಯ ಭಾರತದ ಮೂಲನಿವಾಸಿಗಳಾಗಿದ್ದು, ರಾಮಾಯಣ-ಮಹಾಭಾರತ ಕಥೆಗಳಲ್ಲಿ ಸಮುದಾಯದ ಉಲ್ಲೇಖವಿರುವುದು ಕಾಣಸಿಗುತ್ತದೆ,, "ವಾತ್ಸವದ ಗುರು", ಅಲ್ಲದಿದ್ದರೂ ಮಾನಸಿಕ "ಗುರುವಿಗೆ", ಗುರು ಕಾಣಿಕೆಯಾಗಿ ಹೆಬ್ಬೆರಳನ್ನು ಕೊಟ್ಟ #ಏಕಲವ್ಯ ಈ ಸಮುದಾಯದ ಒಬ್ಬ ಮಹಾನ್ ವ್ಯಕ್ತಿ,,!


12ನೇ ಶತಮಾನದಲ್ಲಿ ಶರಣ ಕ್ರಾಂತಿ ಮತ್ತು ಬಸವಣ್ಣನವರ ಲಿಂಗೈಕದ ನಂತರವೂ ಬಸವತತ್ವ, ಕಾಯಕ-ದಾಸೋಹ ಜಂಗಮ ನಿಷ್ಠೆಯನ್ನು ಜಗತ್ತಿಗೆ ತೋರಿಸಿದ ಕಾಯಕಯೋಗಿ #ನುಲಿಯ_ಚಂದಯ್ಯ ಈ ಸಮುದಾಯದ ಮಹಾನ್ ಶರಣ...!




ಹಾಗೆಯೇ ಬ್ರಿಟಿಷ್ ಸಾಮ್ರಾಜ್ಯವನ್ನೇ ಎದುರುಹಾಕಿಕೊಂಡು, ಉಳ್ಳವರಿಂದ ಕಸಿದು ವಂಚಿತರಿಗೆ ಸಹಾಯ ಮಾಡುತ್ತಾ, ಶೋಷಿತರ ಭೂಮಿ, ವಡವೆ, ಮನೆ, ಮಠವನ್ನು, ಹಿಂತಿರುಗಿಸಿ ಬ್ರಿಟಿಷರಿಗೆ ತಲೆನೋವಾಗಿದ್ದ #ಕ್ರಾಂತಿವೀರ_ಕನ್ನೇಶ್ವರ_ರಾಮ ಈ ಸಮುದಾಯದ ಒಬ್ಬ ವ್ಯಕ್ತಿ...!




ಈ ಸಮುದಾಯದಲ್ಲಿ ಇಷ್ಟೊಂದು ದಿಗ್ಗಜರು ಇದ್ದರೂ, ಈ ಜನ ಇಷ್ಟೊಂದು ಕಸುಬುಗಳಲ್ಲಿ ನಿರತರಾಗಿದ್ದರು, ಇಷ್ಟೊಂದು ಚಾಣಾಕ್ಷತನ ವಿದ್ದರೂ, ಪ್ರಜಾಪ್ರಭುತ್ವ ಬಂದು 70 ವರ್ಷವಾದರೂ, ಶೋಷಿತರಿಗೆ ಇಂದು ಸೂಕ್ತ ಪ್ರಾತಿನಿಧ್ಯ ಸಿಗುತ್ತಿದ್ದರು, ಇನ್ನೂ ಕೂಡ ಈ ಸಮುದಾಯ ವಂಚಿತರ ಪಟ್ಟಿಯಲ್ಲಿ ಉಳಿದುಕೊಂಡಿರುವುದು ಏಕೆ..? ಎಂಬ ಕಾರಣ ಹುಡುಕುತ್ತಾ ಹೋದರೆ ಸಿಗುವುದು 1 ಅಥವಾ 2 ಕಾರಣಗಳಲ್ಲ ನೂರಾರು ಕಾರಣಗಳು...?




ಈ ಸಮುದಾಯದ ಕಲೆ-ಸಂಸ್ಕೃತಿ-ಜೀವನಶೈಲಿ ಮತ್ತು ಶಿಕ್ಷಣ, ಸಾಮಾಜಿಕ, ಆರ್ಥಿಕತೆಯಿಂದ, ಇವರೇಕೆ ವಂಚಿತರಾಗಿದ್ದಾರೆ ಎಂಬ ಕಾರಣ, ಹಾಗೂ ಸರ್ಕಾರದಿಂದ ಈ ಸಮುದಾಯಕ್ಕೆ ಇರುವ ಸೌಲಭ್ಯಗಳು ಅದನ್ನು ಪಡೆಯುವ ಬಗೆ ಇವೆಲ್ಲವನ್ನು...


ಎಳೆ ಎಳೆಯಾಗಿ... ನಿಮ್ಮ ಮುಂದಿಡುತ್ತೇನೆ,, 




ಮುಂದಿನ ಸಂಚಿಕೆಗಳಲ್ಲಿ.....


#ಶ್ರೀಕಾಂತ್_ಕುಳುವ

Community

ಹಲಸೂರು ಗೇಟ್ ಪೊಲೀಸರ ಮಿಂಚಿನ ಕಾರ್ಯಾಚರಣೆ: ಅಂತರ್ ರಾಜ್ಯ ಕಳ್ಳನ ಬಂಧನ

ಬೆಂಗಳೂರು ನಗರ:-  28/09/2023 :ಹಲಸೂರು ಗೇಟ್ ಇನ್ಸ್ಪೆಕ್ಟರ್ ಹನಮಂತ ಕೆ ಭಜಂತ್ರಿ ಹಾಗೂ ಠಾಣೆ ಪೊಲೀಸರು ಚಿನ್ನಾಭರಣಗಳ ಕಳ್ಳತನದ ಆರೋಪದ ಮೇಲೆ ಇಬ್ಬರನ್ನ...