Wednesday, October 18, 2023

ಗುರುವಲ್ಲದ ಗುರು ಪಡೆದದ್ದು ಕೇವಲ ದಕ್ಷಿಣೆ ಅಲ್ಲ ತುಳಿತಕ್ಕೊಳಗಾದವರ ಬದುಕು

ಕುಳುವ ವಾಣಿ ಸಂದೇಶ...✍️
ದ್ರೋಣ ಹಾಗೂ ಏಕಲವ್ಯನ ಸಂವಾದ ಮೊದಲನೇ ಭಾಗದಿಂದ ಮುಂದುವರೆದು..

ದ್ರೋಣಾಚಾರ್ಯರು ಆ ಬಾಲಕನನ್ನು ಉದ್ದೇಶಿಸಿ... 
ಅಯ್ಯಾ ನಿನ್ನ ಮಾತುಗಳನ್ನು ಕೇಳುತ್ತಿದ್ದರೆ ನೀನೊಬ್ಬ ಪ್ರಭುದ್ಧ ಮೇಧಾವಿಂತೆ ಎಲ್ಲಾ ವಿದ್ಯೆಗಳನ್ನು ಕರತಲಾಮಲಕ ಗೊಳಿಸಿಕೊಂಡಿರುವವನಂತೆ ಕಾಣುತ್ತೀಯ, ಆದರೆ,......? 

ನಿನ್ನ ವೇಷಭೂಷಣಗಳನ್ನು ನೋಡಿದರೆ ಸ್ವಲ್ಪ ಆಶ್ಚರ್ಯವಾಗುತ್ತಿದೆ, 

ನಿನ್ನ ಹೆಸರೇನು..? ನಿನ್ನ ತಂದೆ ಹೆಸರೇನು..? ನೀನು ಯಾವ ಕುಲದವನು..? ಯಾವ ದೇಶದವನು..? ನಿಮ್ಮ ವೃತ್ತಿಯೇನು..? ಸ್ವಲ್ಪ ವಿವರವಾಗಿ ತಿಳಿಸು.
ಏಕಲವ್ಯ ಅಷ್ಟೇ ನಾಜೂಕಾಗಿ, ವಿನಯದಿಂದ ಉತ್ತರಿಸುತ್ತಾನೆ, 

ಗುರುವರ್ಯ ನನ್ನ ಹೆಸರು ಏಕಲವ್ಯ, ನನ್ನ ತಂದೆ ಹೆಸರು ಹಿರಣ್ಯಧನು, ನಾನು ಕಾಡಿನಲ್ಲಿರುವ ನಿಷಾದ ಕುಲದ ಬೇಡ ಜನಾಂಗದವನು, ನಾವು ಜರಾಸಂಧನ ಆಡಳಿತದಲ್ಲಿರುವ ದೇಶದ ಅವಿಭಾಜ್ಯ ಅಂಗದಲ್ಲಿರುವ ಕಾಡಿನಲ್ಲಿ   ವಾಸಿಸುತ್ತಿರುವೇವು,..

ನಿಮ್ಮಲ್ಲಿ ನಾನು ವಿದ್ಯೆಗಾಗಿ ಬಂದಿದ್ದೇನೆ,.ದಯಮಾಡಿ ನನಗೆ ಬಿಲ್ವಿದ್ಯೆ ದಾನ ಮಾಡಿ.
ಇದನ್ನು ಕೇಳಿದ ದ್ರೋಣರಿಗೆ ಸ್ವಲ್ಪ ವಿಚಲಿತವಾಗುತ್ತದೆ, ಇವನ ಮಾತುಗಳನ್ನು ಕೇಳಿ ಕ್ಷಣ ಕಾಲ ಸುಮ್ಮನಿದ್ದು ನಂತರ,

ಏಕಲವ್ಯನನ್ನು ಉದ್ದೇಶಿಸಿ ಕೇಳುತ್ತಾರೆ ಮಗು..!      ಈ ವಿದ್ಯೆಗಳೆಲ್ಲವೂ ರಾಜ್ಯವನ್ನು ಆಳುವ ಕ್ಷತ್ರಿಯ ಕುಲದ ರಾಜಕುಮಾರರು ಮಾತ್ರ ಕಲಿಯಬೇಕಾಗಿದೆ,  ನೀವು ಇದನ್ನು ಕಲಿಯುವುದು ಮತ್ತು ಗುರುಕುಲಕ್ಕೇ ಬರುವುದು ಧರ್ಮ ವಿರೋಧವಾಗಿದೆ..? ಹೀಗೆ ಹೇಳುತ್ತಲೇ ಕ್ಷಣ ಕಾಲ ಮೌನವಾದ ದ್ರೋಣರು, ಮನಸ್ಸಿನಲ್ಲಿ ತಾನು ಕೊಟ್ಟ ಮಾತನ್ನು ನೆನಪಿಸಿಕೊಳ್ಳುತ್ತಾ ಮನಸ್ಸನ್ನು ಗಟ್ಟಿ ಮಾಡಿಕೊಂಡು ಸ್ವಲ್ಪ ಕಠೋರವಾಗಿಯೇ ಏಕಲವ್ಯ ನನ್ನು ಉದ್ದೇಶಿಸಿ.

ನಿನ್ಯಾವ ಆಧಾರದ ಮೇಲೆ ಈ ವಿದ್ಯೆಯನ್ನು ಕಲಿತುಕೊಂಡೆ.. ? ಕಾಡುಗಳಲ್ಲಿ ವಾಸ ಮಾಡುತ್ತ ಹುಳ ಒಪ್ಪಟೆಗಳನ್ನು, ಗೆಡ್ಡೆ ಗೆಣಸುಗಳನ್ನು ತಿನ್ನುತ್ತಾ, ಬೇಟೆಯಾಡಿ ಪ್ರಾಣಿಗಳನ್ನ ಮಾಂಸಹಾರವನ್ನು ಸೇವಿಸುವ ಹೀನ ಕುಲದ ವ್ಯಕ್ತಿಯಾದ ನೀನು, ಶ್ರೇಷ್ಠ ಕುಲದ ವ್ಯಕ್ತಿಗಳು ಕಲಿಯುವ ವಿದ್ಯೆಯನ್ನು ಯಾವ ಮಾನದಂಡದಿಂದ ಕಲಿತೆ...?  ನಿನಗೆ ನಿನ್ನ ಮಾತಾಪಿತ್ರರು ಇದನ್ನು ಹೇಳಲಿಲ್ಲವೇ…?

ಧರ್ಮ ವಿರೋಧಿ ಚಟುವಟಿಕೆಗಳಲ್ಲಿ ನಾವುಗಳು ಭಾಗಿಯಾದರೆ ನಿನಗೂ ನಮಗೂ ಸಂಕಷ್ಟ ತಪ್ಪಿದ್ದಲ್ಲ ಈ ಕೂಡಲೇ ನೀನಿಲ್ಲಿಂದ ಹೊರಡು, ತಿಳಿದೋ ತಿಳಿಯದೆ ಮಾಡಬಾರದ ತಪ್ಪನ್ನು ಮಾಡಿರುವೆ ಇಲ್ಲಿಂದ ಈಗಲೇ ಹೊರಡದಿದ್ದರೆ ಆಗು ಈ ವಿದ್ಯೆಯನ್ನೆಲ್ಲ ಮರೆಯದಿದ್ದರೆ ನಿನ್ನನ್ನು ಬಟರನ್ನು ಕರೆಸಿ ಸೆರೆಮನೆಗೆ ದೂಡುತ್ತೇನೆ. ನೀನು ನಿನ್ನ ಮಾತಾಪಿತ್ರರು ಕಠಿಣವಾದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇಲ್ಲಿಂದ ಈ ಕೂಡಲೇ ಹೊರಟು ಹೋಗು..ಎಂದು ಕಠಿಣವಾಗಿ, ಕಠೋರವಾಗಿ ಬಾಲಕನೆಲ್ಲದೆ ನಿಂದಿಸಿ ಬಿಡುತ್ತಾರೆ.

ಗುರುವರ್ಯ ನನಗೆ ಈ ಧರ್ಮ-ಕರ್ಮಗಳ ಅರಿವಿಲ್ಲ,.! ನಾನು ನಿಮ್ಮಲ್ಲಿ ಕೇವಲ ವಿದ್ಯೆ ಕಲಿಯಬೇಕೆಂಬ ಹಂಬಲದಿಂದ ಬಂದಿದ್ದೇನೆ ದಯಮಾಡಿ ಎಲ್ಲರಂತೆ ನನಗೆ ವಿದ್ಯೆಯನ್ನು ಕಲಿಸಿಕೊಡಿ…!
ಏಕಲವ್ಯನ ಈ ಮಾತನ್ನು ಕೇಳಿ ದ್ರೋಣಾಚಾರ್ಯರು ಮನಸ್ಸಿನಲ್ಲೇ ಮಮ್ಮಲ ಮರುಗುತ್ತಾ…."

ಹಿಂದೊಮ್ಮೆ ರಾಜರಿಗೆ ಅಲ್ಲದೆ ಬೇರೆ ಯಾರಿಗೂ ವಿದ್ಯೆಯನ್ನು ಕಲಿಸಿಕೊಡುವುದಿಲ್ಲ ಮತ್ತು ವಿಶೇಷವಾಗಿ ಅರ್ಜುನನನ್ನು ಜಗದ್ವಿಖ್ಯಾತ ಬಿಲ್ಲುಗಾರ ನನ್ನಾಗಿ ಮಾಡುತ್ತೇನೆ ಎಂದು ಶಪಥ ಮಾಡಿದ್ದನ್ನು ಮತ್ತೊಮ್ಮೆ ನೆನೆಯುತ್ತಾ., ಮನಸ್ಸನ್ನು ಗಟ್ಟಿ ಮಾಡಿಕೊಂಡು ಏಕಲವ್ಯನ ಮನವಿಯನ್ನು ತಿರಸ್ಕರಿಸಿಬಿಡುತ್ತಾರೆ"

“ಇಲ್ಲ ಇಲ್ಲ ನಿನಗೆ ವಿದ್ಯೆಯನ್ನು ಕಲಿಸಲಾಗುವುದಿಲ್ಲ ನಿಮ್ಮ ಜನಾಂಗಕ್ಕೆ ಗುರುಕುಲ ಧರ್ಮ ವಿರೋಧ,, ಇಲ್ಲಿಂದ ಹೊರಟು ಬಿಡು ನಮ್ಮಿಬ್ಬರ ಸಂಭಾಷಣೆಯನ್ನು ಬೇರೆ ಯಾರಾದರೂ ನೋಡಿದರೆ ಅನರ್ಥವಾದೀತು”, 

ಎಂದು ಕಠಿಣವಾಗಿ ನುಡಿದು ಭಾರವಾದ ಮನಸ್ಸಿನಿಂದ ಹೊರಟು ಹೋಗುತ್ತಾರೆ.. 

ಇತ್ತ ನಿರಾಸೆಯಿಂದ.., ಒಲ್ಲದ ಮನಸ್ಸಿನಿಂದ.., ಹೆಜ್ಜೆಯ ಮೇಲೆ ಹೆಜ್ಜೆಗಳನ್ನು ಇಡುತ್ತಾ.., ಕಣ್ಣಿನಲ್ಲಿ ನೀರನ್ನು ಜಿನುಗಿಸುತ್ತಾ,...                            ಏಕಲವ್ಯ ಮರಳಿ ಮನೆಗೆ ಬರುತ್ತಾನೆ, 

ಎರಡು ಮೂರು ದಿನಗಳ ನಂತರ ಏಕಲವ್ಯನಲ್ಲಿ ದಿಡೀರನೆ ಬದಲಾವಣೆಗಳು ಕಾಣುತ್ತವೆ, ಗೆಳೆಯರೊಂದಿಗೆ ಆಟವಾಡಲು ಹೋಗುವುದಿಲ್ಲ ಅಸ್ತ್ರ, ಶಸ್ತ್ರಭ್ಯಾಸಗಳಿಗೆ ಹೋಗುವುದಿಲ್ಲ, ಸರಿಯಾಗಿ ಊಟವನ್ನು ಮಾಡುವುದಿಲ್ಲ, ಮುಖದಲ್ಲಿ ಕಳೆಗುಂದತೊಡಗುತ್ತದೆ, ಕುಂತಲ್ಲೇ ಕುಳಿತುಬಿಡುತ್ತಾನೆ, ತದೇಕಚಿತ್ತದಿಂದ ಆಗಾಧವಾಗಿ, ಯೋಚಿಸುತ್ತಾ, ಯಾವುದೊ ಹೊರ ಹಾಕದೆ ಚಿಂತಿಸುತ್ತಿರುತ್ತಾನೆ… 
ದಿಡೀರನೆ ತನ್ನ ಮಗನಲ್ಲಿ ಆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಕಂಡ ಹಿರಣ್ಯಧನು ಮಗನಲ್ಲಿ ಬಂದು ಕೇಳುತ್ತಾನೆ…

ಮಗು ಏಕಲವ್ಯ ಯಾಕೀ ವಿಪರೀತ ಯೋಚನೆ,.? ಯಾಕೀ ಬದಲಾವಣೆ..? ನಿಮ್ಮ ತಂದೆಯಾಗಿ ನಾನಿದನ್ನು ಕೇಳಬಹುದೇ,

ನಿನ್ನೀ ದುಗುಡಕ್ಕೇ ಕಾರಣವೇನು ಮಗು..?

ಅಪ್ಪ ನಾವು ಮನುಷ್ಯರಲ್ಲವೇ..? ನಾವು ಈ ಭೂಮಿಯ ಮೇಲಿನ ವಾರಸುದಾರರಲ್ಲವೇ..? ನಮಗೆ ಈ ಪ್ರಕೃತಿಯ ಮೇಲೆ ಅಧಿಕಾರವಿಲ್ಲವೆ..? ನಾವು ಗುರುಕುಲದಲ್ಲಿ ಶಿಕ್ಷಣ ಕಲಿಯಬಾರದೆ..? ನಮ್ಮ ಮೈಯಲ್ಲಿ ಹರಿಯುತ್ತಿರುವುದು ರಕ್ತವಲ್ಲವೇ..?ನಮ್ಮ ಜನಾಂಗ ಮಾಡಿದ ಅಪರಾಧವಾದರೂ ಏನು..? 

ಹನ್ನೆರಡು ಹದಿಮೂರು ವರ್ಷದ ಹಾಲುಗಲ್ಲದ ಕಂದಮ್ಮ, ಕಲ್ಮಶವಿಲ್ಲದ, ಕಪಟವರಿಯದ, ಮನಸ್ಸಿನಿಂದ ಆಡಿದ ಈ ಮಾತುಗಳನ್ನು ಕೇಳಿ ತಕ್ಷಣವೇ ಹಿರಣ್ಯಧನು ದಿಗ್ಭ್ರಾಂತನಾಗಿ ಬಿಡುತ್ತಾನೆ…? 

ಏನು ಉತ್ತರಕೊಡಬೇಕೆಂದು ತೋಚದೆ ಕ್ಷಣಕಾಲ ಮೌನವಾಗಿ ಬಿಡುತ್ತಾನೆ..?
ಹಿರಣ್ಯದನು ಹಾಗೂ ಏಕಲವ್ಯ ಸಂವಾದ ಮುಂದುವರೆದ ಭಾಗದಲ್ಲಿ.

ಮುಂದುವರೆಯುತ್ತದೆ…….

No comments:

Post a Comment

Community

ಹಲಸೂರು ಗೇಟ್ ಪೊಲೀಸರ ಮಿಂಚಿನ ಕಾರ್ಯಾಚರಣೆ: ಅಂತರ್ ರಾಜ್ಯ ಕಳ್ಳನ ಬಂಧನ

ಬೆಂಗಳೂರು ನಗರ:-  28/09/2023 :ಹಲಸೂರು ಗೇಟ್ ಇನ್ಸ್ಪೆಕ್ಟರ್ ಹನಮಂತ ಕೆ ಭಜಂತ್ರಿ ಹಾಗೂ ಠಾಣೆ ಪೊಲೀಸರು ಚಿನ್ನಾಭರಣಗಳ ಕಳ್ಳತನದ ಆರೋಪದ ಮೇಲೆ ಇಬ್ಬರನ್ನ...